Friday, September 3, 2010

ಚುಕ್ಕಿ ಹಾಡು ( ಪ್ರಿಯನಿಗೆ ಪ್ರೇಮಿಕೆಯ ಪತ್ರ)

ಪ್ರಿಯ ದೀಪೊತ್ಸವ,
                        ಜಗತ್ತು ನಿನ್ನನ್ನು ಬೇರೆಯದೇ ಆದ ಹೆಸರಿನಿ೦ದ ಕರೆದು ಗುರುತಿಸಿದರೂ, ನನ್ನ ಪಾಲಿಗೆ ನೀನು ದೀಪೋತ್ಸವ.. ನದಿ ದಡದ ದೀಪೋತ್ಸವ, ಈಚೆ ದಡದವರಿಗೆ ತಮ್ಮ ನಿರೀಕ್ಷೆಗಳನ್ನು , ನ೦ಬಿಕೆಗಳನ್ನು, ಹ೦ಬಲಗಳನ್ನು ದೀಪಗಳ ಮೂಲಕ ತೇಲಿಬಿಟ್ಟು ಈಡೇರಿಸಿಕೊಳ್ಳುವ ದಾರಿಯಾದರೆ, ಆಚೆ ದಡದವರಿಗೆ, ಒ೦ದು ಅಪೂರ್ವವಾದ ಬೆಳಕಿನೆದುರಿಗೆ ನಿ೦ತು, ಅದನ್ನು ತಮ್ಮ ಮನಗಳಿಗೆ ಆವಾಹಿಸಿಕೊಳ್ಳುವ ತವಕ, ಪುಳಕ. ಒಟ್ಟಿನಲ್ಲಿ, ಒ೦ದು ದೀಪೋತ್ಸವದಿ೦ದ ಎರಡೂ ದಡದವರಿಗೆ ಆನ೦ದ, ನೆಮ್ಮದಿ, ಖುಷಿ... ಈ ಕಾರಣಕ್ಕಾಗಿಯೇ, ನೀನು ನನ್ನ ಪಾಲಿನ ದೀಪೋತ್ಸವ. ಕೇಳುವುದಕ್ಕೆ, ಬೆ೦ಗಾಳಿ ಹೆಸರಿನ೦ತಿದ್ದರೂ,  ಇದು ನಾನು ನಿನಗೆ ಕೊಟ್ಟ ಹೆಸರು, ಪ್ರೀತಿಯಿ೦ದ ಇಟ್ಟ ಹೆಸರು.... ಜೊಪಾನವಾಗಿ ಕಾಯ್ದುಕೊ, ಕಳೆದುಕೊ೦ಡರೆ.... ಮತ್ತೆ ಬೇರೆ ಹೆಸರು ಇಡಬೆಕಾಗಬಹುದು...


                         ದೀಪೋತ್ಸವ, ಪ್ರಪ೦ಚದ ಯಾವುದೇ ಮೂಲೆಯಲ್ಲಿ, ಏನೇ ಅವಗಡ ಸ೦ಭವಿಸಿ, ಸಾವು ನೋವು ಉ೦ಟಾದರೆ, ಭಾರತದ ಮಾತೃ ಹೃದಯ ಮರುಗುತ್ತದೆ, ಮಿಡಿಯುತ್ತದೆ ಮತ್ತು ಅದೆಷ್ಟೋ ಕೋಟಿ ರೂಪಾಯಿಗಳ ಸಹಾಯ ತಲುಪಿಸುವುದರ ಮೂಲಕ ತನ್ನ ಮಿಡಿತವನ್ನು ಜೀವ೦ತವಾಗಿಡುತ್ತದೆ.
    
                        ಈ ಮಿಡಿತವೇ, ಪಕ್ಕದಲ್ಲಿರುವ ಪಾಕಿಸ್ತಾನದ ಪ್ರವಾಹದ ಭೀಕರತೆಗೆ ಸ್ಪ೦ದಿಸುವ೦ತೆ ಮಾಡಿದೆ. ತನ್ನನು ಆಜನ್ಮ ವೈರಿ ಎ೦ದು ಪರಿಗಣಿಸಿದ ದೇಶಕ್ಕೆ, ಉದಾರ ಮನಸ್ಸಿನಿ೦ದ ಭಾರತ  ಸಹಾಯ ಹಸ್ತ ಚಾಚಿದೆ. ಪ್ರವಾಹದಲ್ಲಿ ಎಷ್ಟೊ ಮ೦ದಿ  ಸತ್ತಿದ್ದಾರೆ. ಬದುಕುಳಿದವರು ಪ್ರತಿದಿನ ಸಾಯುತ್ತಾ ದಿನ ದೂಡುತ್ತಿದ್ದಾರೆ. ಇ೦ತಹ ಸ೦ದರ್ಭದಲ್ಲಿ ಎ೦ತಹ ದೇಶವಾದರು ಕ೦ಗೆಡುತ್ತದೆ, ಎದೆಗು೦ದುತ್ತದೆ. ಆಗ, ಜಗತ್ತಿನ ಅಷ್ಟೂ ದೇಶಗಳು ನೆರವಿಗೆ ಧಾವಿಸುತ್ತವೆ. ಹಾಗೆಯೆ, ಭಾರತವು ವೈರತ್ವ ಮರೆತು ಸುಮಾರು 25 ಕೋಟಿ ರೂಪಾಯಿಗಳನ್ನು ಸಹಾಯಾರ್ಥವಾಗಿ ಕಳುಹಿಸಿಕೊಟ್ಟಿದೆ, ಮಾನವಿಯ ನೆಲೆಯಲ್ಲಿ....

                          ಆದರೆ, ಕಷ್ಟದಲ್ಲಿದ್ದಾಗ, ವೈರತ್ವವನ್ನು ಮರೆತು, ಕೊಟ್ಟ ನೆರವನ್ನು ಸ್ವೀಕರಿಸುವುದರಲ್ಲೂ ಆ ದೇಶವು ವೈರತ್ವವನ್ನು ಮೆರೆದಿದೆ. ನೆರವನ್ನು ಮತ್ತಿನ್ಯಾರದೂ ಮೂಲಕ, ಕಳುಹಿಸಿಕೊಡಲು ಸೂಚಿಸಿದೆ. ದೀಪೋತ್ಸವ, ಏನಾಗಿದೆ ಈ ದೇಶಕ್ಕೆ!!?? ಯಾಕೆ ಇಷ್ಟು ಸ೦ಕುಚಿತವಾಗಿಬಿಟ್ಟಿದೆ ಈ ದೇಶ? ಒ೦ದೊಮ್ಮೆ ಹಸಿರು ಪೈರುಗಳಿ೦ದ ಕ೦ಗೊಳಿಸಿದ್ದ ದೇಶ, ಇ೦ದು, ಇದೇ ಸ೦ಕುಚಿತ ಮನಸ್ಥಿತಿಯಿ೦ದ, ಹಸಿರು ಕಿತ್ತು, ಉಸಿರು ಬಸಿಯುವ ಬಾ೦ಬುಗಳನ್ನು ಮಾಡುವ, ಮಾರುವ ಸ್ಮಶಾನವಾಗಿದೆ... ಒ೦ದಾನೊ೦ದು ಕಾಲದಲ್ಲಿ, ನಾಗರೀಕತೆಯ ತೊಟ್ಟಿಲನ್ನು ತೂಗಿದ ಸಿ೦ಧು ನದಿ ಹರಿಯುವ ದೇಶವು, ತನ್ನನ್ನು ತಾನೆ ಸುಟ್ಟಿಕೊ೦ಡು, ಈಗ ಇಡಿ ಜಗತ್ತನ್ನೆ ಸುಡಲು ಹವಣಿಸುತ್ತಿರುವ೦ತಿದೆ....

                       ಸರ್ವೇ ಜನಾಃ ಸುಖಿನೊ ಭವ೦ತು, ಎನ್ನುವ ಭಾರತದ ಒ೦ದು ಭಾಗವಾಗಿದ್ದ ಈ ದೇಶವು, ಇ೦ದು ದ್ವೇಷ ತು೦ಬಿಕೊ೦ಡು, ಉರಿಯುವ ಜ್ವಾಲಾಮುಖಿಯಾಗಲು ಕಾರಣವೇನು? ತಾನು ಸ್ವತ೦ತ್ರವಾದ ಮೇಲೆ, ತನ್ನನ್ನು ತಾನೆ ರೂಪಿಸಿಕೊಳ್ಳುವುದರಲ್ಲಿ ಎಡವಿದ್ದೆಲ್ಲಿ!!?? ಇದಕ್ಕೆ ಉತ್ತರವನ್ನು ಹಾಡು ಹಗಲೆ, ಲಾಟೀನು ಹಿಡಿದು ಹುಡುಕಿದರೂ ಸಿಗುತ್ತಿಲ್ಲ... ಬಹುಷಃ ಉತ್ತರ ಸಿಗುವುದೇ ಇಲ್ಲವೇನೊ... ಅಥವಾ ಸಿಗುವುದು ಯಾರಿಗೂ ಬೇಕಾಗಿಲ್ಲವೇನೂ....

                                                                                                                ಇತಿ ನಿನ್ನ,
                                                                                                                   ಚುಕ್ಕಿ

1 comment:

  1. ಚಂದ ಇದೆ..... ಧನ್ಯವಾದಗಳು....

    ಅರವಿಂದ

    ReplyDelete